Friday, February 26, 2010

'ಮುದ್ರಾರ್ಣವ'ದ ಮೋಹಕ ಮೇಘಮಲ್ಹಾರ... : ಅನಾವರಣದಲ್ಲರಳಿದ ಅಲೆಗಳು

ನೂಪುರದ ಬಳಗಕ್ಕೆ ಅಂದು ಕಣ್ತುಂಬಿಕೊಳ್ಳುವ ಹಬ್ಬ. ಇನ್ನೇನು ವಾರ್ಷಿಕ ಸಂಭ್ರಮಕ್ಕೆ ಎರಡು ತಿಂಗಳಿರುವಾಗಲೇ, ಮೂರನೇ ವರ್ಷಾಂತ್ಯವಾಗುವುದರೊಳಗೆ ಸಂತಸದ ಸಂದರ್ಭಗಳಿಗೆ ಮುನ್ಸೂಚನೆಯೇನೋ ಎಂಬಂತೆ ವಿದ್ವತ್ಪೂರ್ಣ ಕ್ಷಣಗಳನ್ನು ಬರಮಾಡಿಕೊಂಡ ಸಾಂಗತ್ಯ. ನವೆಂಬರ್ ೨೨. ಸಂಜೆ ೪.೩೦. ವಿಮರ್ಶಕ, ಲೇಖಕ ವಿ.ಬಿ. ಅರ್ತಿಕಜೆ, ಹಾಸ್ಯ ಸಾಹಿತಿ ಕು.ಗೋ, ನಾಟ್ಯಾಚಾರ್ಯರುಗಳಾದ ಕಮಲಾಕ್ಷಾಚಾರ್, ದೀಪಕ್ ಕುಮಾರ್, ಉಜಿರೆ ಕಾಲೇಜಿನ ಕಲಾಸಕ್ತ ಉಪನ್ಯಾಸಕರು, ಕಲಾರಸಿಕ ವಿದ್ಯಾರ್ಥಿಗಳು, ಊರಿನ ಹೆಮ್ಮೆಯ ನಾಗರಿಕರು ಮುಂತಾಗಿ; ಕೆಲವೇ ಕ್ಷಣಗಳ ಅವಧಿಯಲ್ಲಿ ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ರಾಮಕೃಷ್ಣ ಸಭಾಂಗಣ ಸಧಭಿರುಚಿಯ ಪ್ರೇಕ್ಷಕರಿಂದ, ಸಾಹಿತಿಗಳಿಂದ ತುಂಬಿ ಹೋಗಿತ್ತು. ಶ್ರೀ ರಾಮಚಂದ್ರಾಪುರ ಕೃಪಾಪೋಷಿತ ಯಕ್ಷಗಾನ ಮೇಳದಿಂದ ನಿರ್ಮಿತವಾದ ಅದ್ಧೂರಿ ವೇದಿಕೆ. ಅಸೀಮರೆನಿಸಿದವರು ವೇದಿಕೆಯಲ್ಲಿ ಅಲಂಕೃತರಾಗಿದ್ದ ಅರ್ಥಗರ್ಭಿತ ಕ್ಷಣ. ಅದು 'ನೂಪುರ ಭ್ರಮರಿ'ಯ ಸಂಪಾದಕಿ, ಪತ್ರಿಕೋದ್ಯಮ ಪ್ರಾಧ್ಯಾಪಕಿ, ಕಲಾವಿದೆ ಕು. ಮನೋರಮಾ ಬಿ.ಎನ್ ರಚಿತ ಹಸ್ತ-ಮುದ್ರೆಗಳ ಕುರಿತಾದ ಸಂಶೋಧನಾ ಕೃತಿ 'ಮುದ್ರಾರ್ಣವ' ಅನಾವರಣದ ದಿನ.

*********

ಕೃತಿಯನ್ನು ಅನಾವರಣಗೊಳಿಸಿ ಶುಭ ಹಾರೈಸಿದವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಎಸ್ ಡಿ ಎಂ ಕಾಲೇಜು ಪ್ರಾಚಾರ್ಯ ಡಾ. ಬಿ. ಯಶೋವರ್ಮ. ಅವರಾಡಿದ ಮಾತುಗಳೆಡೆಗೆ ಒಂದು ನೋಟ ಇಲ್ಲಿದೆ :

'ಪುಸ್ತಕ ಹೊರತರುವುದು ಎಂದರೆ ಹೆರಿಗೆ ನೋವು ಅನುಭವಿಸಿದಂತೆ. ಆದರೆ ಮಗುವಿನ ಜನನವಾಗಿ ಮುಖ ನೋಡಿದಾಕ್ಷಣ ಹೇಗೆ ತಾಯಿ ಖುಷಿ ಪಡುತ್ತಾಳೋ ಹಾಗೆಯೇ ಲೇಖಕ. ಹೇಗೆ ಮಗು ಹೊಸ ಭರವಸೆಯೊಂದನ್ನು ಕೊಡುತ್ತದೆಯೋ ಹಾಗೆಯೇ ಪುಸ್ತಕವೂ ಸಮಾಜದಲ್ಲಿ ಭರವಸೆಯೊಂದನ್ನು ತರಬೇಕು. ಅಂತಹ ಕೆಲಸ ಮುದ್ರಾರ್ಣವದಲ್ಲಾಗಿದೆ.

ಸಿನಿಮಾ ಮಾಧ್ಯಮದಲ್ಲಿ ಹೂ ಕೊಡುವುದನ್ನು ಅಭಿನಯಿಸಬೇಕಿದ್ದರೆ ನಾಯಕ, ನಾಯಕಿ, ಸುತ್ತಮುತ್ತಲ ಸೆಟ್ಟಿಂಗ್, ಹೂವು, ನೂರಾರು ಜನರು, ಹಾಡು ಇತ್ಯಾದಿ ಅಗತ್ಯ. ಅದೇ ನಾಟಕದಲ್ಲಿ ಬೆಳಕು, ರಂಗಸಜ್ಜಿಕೆ, ಹೂವು, ಹುಡುಗ, ಹುಡುಗಿ ಎಲ್ಲರೂ ಬೇಕು. ಅದೇ ಭರತನಾಟ್ಯದಂತಹ ನೃತ್ಯಮಾಧ್ಯಮದಲ್ಲಾದರೋ ಹೂವೂ ಬೇಡ, ಬೇರಾವುದೇ ಪರಿಕರಗಳೂ ಬೇಡ, ಖರ್ಚೂ ಇಲ್ಲ. ನರ್ತಕಿ ಅಥವಾ ನರ್ತಕ ಭಾವಾಭಿನಯದಿಂದ ಹೂವಿನ ಮುದ್ರೆಯನ್ನು ಕೈಯ್ಯಲ್ಲಿ ಹಿಡಿದು ಅಭಿನಯಿಸಿ ಕೊಟ್ಟಂತೆ ಮಾಡಿದರೂ ಸಾಕು; ಕಲಾರಸಿಕನಿಗೆ ಸಂವಹನವಾಗುತ್ತದೆ. ಜೊತೆಗೆ ಸಂತಸವೂ ಕೂಡಾ ! ಹಾಗೆ ನೋಡಿದರೆ ಹೆಚ್ಚು ವಾಕ್ಯಗಳಲ್ಲಿ ಹೇಳುವುದಕ್ಕಿಂತ ಸಣ್ಣ ಪದಗಳಲ್ಲಿ ಹೆಚ್ಚು ಅರ್ಥವನ್ನು ಗ್ರಹಿಸುವಂತದ್ದು ಕಷ್ಟ. ಆದರೆ ಅದರಿಂದಾಗುವ ಸಂತಸದ ಅನುಭವ ಹೆಚ್ಚು.

ನಾವು ದಿನನಿತ್ಯ ೨೦ ಶೇಕಡಾ ಮಾತಿನ ಮೂಲಕ ಸಂವಹನ ಮಾಡುತ್ತೇವೆ. ಉಳಿದ ಶೇಕಡಾ ೮೦ನ್ನು ಭಾವ, ಸಂಜ್ಞೆ, ಮುದ್ರೆಗಳೇ ಆಧಿಪತ್ಯ ಸಾಧಿಸುತ್ತವೆ. ಭರತನಾಟ್ಯದಲ್ಲಿ ಅಲ್ಲೊಂದು ಇಲ್ಲೊಂದು ಶಬ್ದಗಳು, ಮುದ್ರೆಗಳು ಅರ್ಥವಾದರೂ ಅದರಿಂದ ಅವರ್ಣನೀಯ ಆನಂದವಾಗುತ್ತದೆ. ಒಂದುವೇಳೆ ಎಲ್ಲವೂ ಅರ್ಥವಾಗುವಂತಾದರೆ ಎಷ್ಟು ಸಂತಸ, ಆನಂದವಾಗಬಹುದು? ಸಂಗೀತವನ್ನು ದೃಶ್ಯಮಾಧ್ಯಮದಲ್ಲಿ ಕಲಿಸುವಂತದ್ದೇ ನೃತ್ಯ. ಅದನ್ನು ಅರಿಯುವಲ್ಲಿ ಅವಕಾಶ ನೀಡಿದೆ ಮುದ್ರಾರ್ಣವ. ಇಂತಹ ಹೆಚ್ಚು ಹೆಚ್ಚು ಸಾಧನೆಗಳು ಮೂಡಿಬರಲಿ.

ಇವತ್ತಿನ ಯುವಕರಿಗೆ, ಮಕ್ಕಳಿಗೆ ಶಾಸ್ತ್ರೀಯ ಕಲೆಗಳ ಮೇಲೆ ಆಸಕ್ತಿ ಗತಿಸಿಹೋಗುತ್ತಿದೆ. ಆಸಕ್ತಿ ಹುಟ್ಟಿಸುವ ಅವಕಾಶ ಮತ್ತು ಮಾಹಿತಿಯನ್ನು ಕೊಡುತ್ತಿಲ್ಲವೆಂಬುದು ಕಾರಣಗಳಲ್ಲೊಂದು. ಅದಕ್ಕೆ ಸಂಬಂಧಿಸಿದ ಚೇತೋಹಾರಿಯಾದ ಪುಸ್ತಕಗಳು ಅವರ ಕೈಗೆಟುಕುವಂತಾಗಿಲ್ಲ. ಈ ನಿಟ್ಟಿನಲ್ಲಿ ವಿದ್ವಜ್ಜನರಿಗಷ್ಟೇ ಅಲ್ಲ, ಸಾಮಾನ್ಯರಿಗೂ ಓದಿ ತಿಳಿದುಕೊಳ್ಳಲು ಅವಕಾಶವಾಗುವಂತೆ, ನೃತ್ಯ ಸಂದರ್ಭಗಳಲ್ಲಿ ತನ್ಮಯತೆಯಿಂದ ಅರ್ಥಪೂರ್ಣವಾಗಿ ಭಾಗವಹಿಸಲು, ನೋಡಲು ಅನುಕೂಲವಾಗುವಂತೆ ಪುಸ್ತಕವನ್ನು ಸಾರಸ್ವತಲೋಕಕ್ಕೆ ಕೊಟ್ಟಿದ್ದಾರೆ.'

***********

ಮುದ್ರಾರ್ಣವಕ್ಕೆ ಸುಂದರ ಬೆನ್ನುಡಿಯನ್ನಿತ್ತ ಬಹುಶ್ರುತ ವಿದ್ವಾಂಸ, ಯಕ್ಷಗಾನ ಕಲಾವಿದ, ವಿಮರ್ಶಕ ಡಾ. ಎಂ. ಪ್ರಭಾಕರ ಜೋಷಿ. ಅವರು ಕೃತಿಯನ್ನು ವಿಮರ್ಶಿಸುತ್ತಾ ಮಾತನಾಡಿದ್ದರ ಒಂದು ಝಲಕ್ ಇಲ್ಲಿದೆ :
sdm
'ಭಾರತದ ಆರ್ಷೇಯ ಪರಂಪರೆಗಳು ಮುದ್ರೆಗಳನ್ನು ಸ್ಪಷ್ಟಪಡಿಸುತ್ತವೆ. ಹೋಮಾದಿ ಪೂಜೆ ಪ್ರಾರ್ಥನೆಗಳಾದಿಯಾಗಿ ಮುದ್ರೆಗಳ ಬಳಕೆ ಮೊದಲಿನಿಂದಲೂ ಇತ್ತು. ಇಂತಿಂಥ ಮುದ್ರೆಗಳಿಗೆ ಇಂತಿಂಥ ಫಲಗಳು ಎಂಬ ಧಾರ್ಮಿಕ ಪ್ರಜ್ಞೆ ಮತ್ತು ಅದಕ್ಕೆ ಸಾಕ್ಷಿ ಕೂಡಾ ಇತ್ತು. ಇಂತಹ ಮುದ್ರಾಪ್ರಪಂಚದ ಕುರಿತಂತೆ, ಅದರ ಹುಟ್ಟು, ಬೆಳವಣಿಗೆ, ವಿವಿಧ ಆಯಾಮ, ಉಪಯೋಗ, ವಿನಿಯೋಗದ ಕುರಿತಂತೆ ವಿಸ್ತಾರವಾದ ಗ್ರಂಥವಿದು. ಶಬ್ದಕ್ಕೆ ಶಕ್ತಿಯಿದೆ ನಿಜ. ಆದರೆ ಸಂವಹನ ಎಂದಾಗ ಮಾತಿನ ಹೊರತಾಗಿಯೂ ಹೇಗೆಲ್ಲಾ ಇತರ ಸಾಧ್ಯತೆಗಳಿವೆ ಎಂಬುದನ್ನು ಪುಸ್ತಕ ತಿಳಿಸಿಕೊಡುತ್ತದೆ.

ಮುದ್ರೆಗಳ ಬಗ್ಗೆ ಬಂದಿರುವ ಪುಸ್ತಕಗಳ ಪೈಕಿ ಅಂತರ್‌ಶಿಸ್ತೀಯ ನೆಲೆಯಲ್ಲಿ ಹೊರಬಂದಿರುವ ಭಾರತದ ಮೊದಲ ಪುಸ್ತಕವಿದು. ಒಂದೇ ನೋಟಕ್ಕೆ ಓದಿ ಮುಗಿಸುವ ಪುಸ್ತಕವಲ್ಲ. ನೃತ್ಯದಲ್ಲಿನ ಅನೇಕ ಹಿರಿ- ಕಿರಿಯ ಅಧ್ಯಾಪಕರಿಗೆ, ಗುರುಗಳಿಗೆ, ವಿದ್ಯಾರ್ಥಿಗಳಿಗೆ ದಶಕ ದಶಕಗಳ ಕಾಲಕ್ಕೂ ಮಾರ್ಗದರ್ಶಿಯಾಗಬಲ್ಲಂತದ್ದು. ಯಾವ ಪಿಹೆಚ್‌ಡಿ ಸಂಶೋಧನೆಗಳಿಗೂ ಕಡಿಮೆಯಿಲ್ಲದಂತಿದೆ.

ಭಾರತೀಯ ಕಾವ್ಯ ಮೀಮಾಂಸೆ, ಕಲಾಮೀಮಾಂಸೆಯು ಜಗತ್ತಿಗೆ ಬೇರಾವ ಸಂಸ್ಕೃತಿಯೂ ಅಷ್ಟಾಗಿ ನೀಡದ ವಿಶಿಷ್ಟವಾದ ಕೊಡುಗೆಗಳನ್ನು ನೀಡಿದೆ. ಬೇರೆ ಯಾವುದೇ ದೇಶ-ಸಂಸ್ಕೃತಿಗಳಲ್ಲೂ ಇಲ್ಲದ, ಅಭಿಪ್ರಾಯ ವ್ಯತ್ಯಾಸಗಳು ಬಾರದ, ವಾದಕ್ಕೆ ಎಡೆಯಿರದ ಸಂಪೂರ್ಣವಾಗಿ ಆದರಿಸಬೇಕಾದ ಬಗೆಯ ಕಲಾತತ್ವಗಳನ್ನು ಕೊಟ್ಟಿದೆ. ಇಲ್ಲಿ ಕಾವ್ಯ ಎಂದರೆ ಕೇವಲ ಠಿoeಣಡಿಥಿ ಮಾತ್ರ ಅಲ್ಲ. ಗೀತ, ವಾದ್ಯ, ನೃತ್ಯ, ಪಠ್ಯ, ಸಂಗೀತಗಳನ್ನು ಒಳಗೊಂಡ ನಿತ್ಯ ನಿರಂತರವೆನಿಸುವ ಪರಿಕಲ್ಪನೆ. ಇಲ್ಲಿನ ಮಣ್ಣಿನ ನೃತ್ಯ, ನಾಟಕ, ಗೀತ, ವಾದ್ಯಗಳ ಪರಿಕಲ್ಪನೆ ಓದಿದಷ್ಟೂ, ಅನುಭವಿಸಿದಷ್ಟೂ ಹೊಸ ಹೊಳಹುಗಳನ್ನು ಕೊಡುವಂತದ್ದು; ದೂರದೃಷ್ಟಿಯುಳ್ಳವು ; ಸಮಗ್ರವೆನಿಸುವಂತದ್ದು. ಅದರಲ್ಲಿ 'ರಸೋವೈಸಃ' ಭಾರತೀಯ ಸಂಸ್ಕೃತಿಯು ನೀಡಿದ ಆಧ್ಯಾತಿಕವಾಗಿಯೂ, ಕಲಾದೃಷ್ಟಿಯಿಂದಲೂ ಸಂಪೂರ್ಣವೆನಿಸುವ ರಸಪರಿಕಲ್ಪನೆ. ಅಂತಹ ರಸ ಆಧರಿತ ನೃತ್ಯಕ್ಕೆ ಸಂಬಂಧಿಸಿದ ವಿದ್ವತ್ಪೂರ್ಣ ಸಂಶೋಧನಾ ಅಧ್ಯಯನಗಳಲ್ಲಿ ಮುದ್ರಾರ್ಣವ ಮೊದಲನೇಯ ದರ್ಜೆಯದು.

ಭಾರತೀಯ ನೃತ್ಯಗಳ ಪೈಕಿ ಭರತನಾಟ್ಯಕ್ಕೆ ಎಲ್ಲದಕ್ಕಿಂತ ಮೇಲ್ದರ್ಜೆಯ, ಅತ್ಯುನ್ನತ ಸ್ಥಾನವಿದೆ. ಆದರೆ ಇಂದಿನ ಭರತನಾಟ್ಯ ಕಾರ್ಯಕ್ರಮ, ತರಗತಿಗಳು ಕೇವಲ ಪ್ರದರ್ಶನದ ಉದ್ದೇಶವಷ್ಟೇ ಹೊಂದಿ ಗುಣಾತ್ಮಕವಾದ ಅಧ್ಯಯನಗಳು ಬೆರಳೆಣಿಕೆಯಾಗುತ್ತಿವೆ. ದಿನದಿಂದ ದಿನಕ್ಕೆ ಕಳಪೆಯಾಗುತ್ತಿವೆ. ನೃತ್ಯ ಸಂಗೀತಗಳು ಹೆಚ್ಚು ತಪಸ್ಸನ್ನು ಬಯಸುವ ಕ್ಷೇತ್ರ. ಆದರೆ ಇಂದು ೮ ದಿನದಲ್ಲಿ ಕಲಿತು, ೧೬ ದಿನದೊಳಗೆ ಸ್ಟೇಜ್ ಹತ್ತಬೇಕು ಎಂದೇ ಆಗಿದೆ. ಇಂತಹ ಸಂದರ್ಭದಲ್ಲಿ ವೃತ್ತಿಪರವಾದ ಯಶಸ್ಸನ್ನು ಬದಿಗಿರಿಸಿ ಇಂತಹ ಕೆಲಸ ಮಾಡುವುದು ಅಷ್ಟು ಸುಲಭ ಅಲ್ಲ. ಭರತನಾಟ್ಯ ಸ್ವರೂಪದ ಆಂಗಿಕ ವಿಷಯಗಳಲ್ಲಿ ಬರುವ ಮುದ್ರಾವಿಭಾಗದ ಬಗ್ಗೆ ಗಂಭೀರವಾದ, ಪರಿಣಾಮಕಾರಿಯಾದ ಸಂಶೋಧನೆ ನಿಜಕ್ಕೂ ಶ್ಲಾಘನೀಯ.

ಸಂಶೋಧನೆಗಳು ಸಮಾಜಮುಖಿಯಾಗಿರಬೇಕು ; ಆಯಾಯ ಕ್ಷೇತ್ರಕ್ಕೆ ಪ್ರಯೋಜನ ಕೊಡಬೇಕು ; ಅದರಲ್ಲಿ ಕೆಲಸ ಮಾಡುವವರಿಗೆ ಪ್ರೇರಣೆ ಕೊಡಬೇಕು ; ಆ ಕ್ಷೇತ್ರಕ್ಕೆ ಪ್ರಯೋಜನ, ಅರಿವು ನೀಡುವ ಕೆಲಸವಾಗಬೇಕು ; ಕೇವಲ ಗ್ರಂಥಾಲಯಕ್ಕೋ, ಪ್ರಕಾಶಕರಿಗೋ ಸೀಮಿತವಾಗಿ ಉಳಿಯದೆ ಉಪಯುಕ್ತ ಚರ್ಚೆಗಳನ್ನು, ವಿಚಾರಗಳನ್ನು ವಿಷಯಕ್ಕೆ ಸಂಬಂಧಿಸಿದಂತೆ ಬೆಳೆಸಬೇಕು. ಈ ನಿಟ್ಟಿನಲ್ಲಿ ಗಮನಿಸಿದರೆ ಮುದ್ರಾರ್ಣವ ಸಾರ್ಥಕತೆ ಪಡೆದಿದೆ. ಈ ಕೃತಿಯಲ್ಲಿ ಬಹುಮುಖ್ಯವಾಗಿ ಸಮಾಜದಲ್ಲಿ ಮುದ್ರೆಗಳ ಬಳಕೆಯ ಬಗ್ಗೆ, ಪ್ರೇಕ್ಷಕರ ಗ್ರಹಿಕೆ ಹೇಗಿದೆ ಎನ್ನುವುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಇಂದಿನ ಬಹುಪಾಲು ಸಂಶೋಧನೆಗಳ ರೀತಿ-ನೀತಿ, ಸ್ಥಿತಿ-ಗತಿ ಸಮಾಜಕ್ಕೆ ಆದರ್ಶಪ್ರಾಯವಾಗುವಂತಿಲ್ಲ. ಈಗಲೂ 'ದೇಶದ ಸ್ವಾತಂತ್ರ್ಯದಲ್ಲಿ ಗಾಂಧೀಜಿಯವರ ಪಾತ್ರ' ಎಂಬಂತ ಚರ್ವಿತ ಚರ್ವಣ ವಿಷಯಗಳನ್ನೇ ಇನ್ನೂ ಕೂಡಾ ಸಂಶೋಧನೆ ಮಾಡಿದರೆ ಅದರ ಸಾಮಾಜಿಕ ಬಳಕೆಯ ವ್ಯಾಪ್ತಿ ಕುಸಿಯುತ್ತದೆ. ಅದರಲ್ಲೂ ಗುಣಮಟ್ಟದ ಸಂಶೋಧನೆಗಳು ನೃತ್ಯಕ್ಕೆ ಸಂಬಂಧಿಸಿದಂತೆ ಭಾರೀ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಗಮನಿಸಿದಾಗ ಯಕ್ಷಗಾನದಲ್ಲಿ ನಾಟ್ಯಶಾಸ್ತ್ರ ತಿಳಿಸುವ ಚಾರಿ, ಕರಣ, ಭೇದಗಳೆಲ್ಲವೂ ಇದ್ದರೂ ; ವ್ಯವಸ್ಥಿತವಾಗಿಲ್ಲ. ಆದರೆ ಇಂದಿನವರೆಗೂ ಯಕ್ಷಗಾನದಲ್ಲಿ ಬಂದಿರುವ ಅಷ್ಟೂ ಸಂಶೋಧನೆಗಳೂ ಗುಣಮಟ್ಟವುಳ್ಳವೇ ಆಗಿದೆ.

ಆಸಕ್ತಿಯ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದರೆ ಹೆಚ್ಚು ಬೆಳವಣಿಗೆಯಿದೆ ಎಂಬುದಕ್ಕೆ ಮುದ್ರಾರ್ಣವವೇ ಸಾಕ್ಷಿ. ವಿಷಯದ ಆಳ ಮುಟ್ಟುವಲ್ಲಿ ಸಾಕಷ್ಟು ಪರಿಶ್ರಮ ಹೊಂದಿರುವ ಈ ಕೃತಿ ಓದುಗರು ಅಗತ್ಯ ಪರಾಮರ್ಶಿಸಲೇಬೇಕಾದದ್ದು.'

*******

ಸಭಾಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಟಿ. ಶಾಮ ಭಟ್ ಅವರು ಮಾತನಾಡಿ, ನೃತ್ಯ ಕಲಾವಿದರು ಪುಸ್ತಕವನ್ನು ಅಧ್ಯಯನ ಮಾಡಿ ನಾಟ್ಯ ಮಾಡುವಾಗ ಅನುಸರಿಸಿದರೆ ಚೆನ್ನ. ಇನ್ನು ಮುಂದೆಯೂ ಉತ್ತಮ ಕೃತಿಗಳು ಹೊರಬರಲಿ, ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಕಾರ್ಯವೂ ಈ ನಿಟ್ಟಿನಲ್ಲಿ ಶ್ಲಾಘನೀಯ ಎಂದು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಖ್ಯಾತ ಬರಹಗಾರ ಪ. ರಾ. ಶಾಸ್ತ್ರಿ ಅವರಿಗೆ ಕುರಿಯ ವಿಠಲ ಶಾಸ್ತ್ರಿ ಸಮ್ಮಾನ ಮತ್ತು ನೀರ್ಪಾಜೆ ಭೀಮ ಭಟ್ಟ ಸಂಸ್ಮರಣಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮನೋರಮಾ ಅವರನ್ನು ಪ್ರತಿಷ್ಠಾನದ ವತಿಯಿಂದ ಡಾ. ಬಿ. ಯಶೋವರ್ಮ ಅವರು ಗೌರವಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ. ಸಾ. ಪ. ಪೂರ್ವಾಧ್ಯಕ್ಷ ಶ್ರೀ ಹರಿಕೃಷ್ಣ ಪುನರೂರು, ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಭಾಗವಹಿಸಿ ಮಾತನಾಡಿದರು. ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶೀಯ ಮೊಕ್ತೇಸರರೂ, ಕುರಿಯ ವಿಠಲಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಗೌರವಾಧ್ಯಕ್ಷರೂ ಆದ ಶ್ರೀ ವಿಜಯರಾಘವ ಪಡ್ವೆಟ್ನಾಯ, ಮನೋರಮಾ ಅವರ ಹೆತ್ತವರಾದ ಶ್ರೀ ಸಾನ್ನಿಧ್ಯ ಪ್ರಕಾಶನದ ಅಧ್ಯಕ್ಷ, ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಪ್ರಧಾನ ಪುರೋಹಿತ ವೇದಮೂರ್ತಿ ಬಿ. ಜಿ. ನಾರಾಯಣ ಭಟ್, ಮತ್ತು ಸಾವಿತ್ರಿ ಭಟ್ ಭಾಗವಹಿಸಿದ್ದರು.

ಕಲಾವಿದ, ಸಂಶೋಧಕ ಶ್ರುತಕೀರ್ತಿರಾಜ್ ಅವರ ನಿರೂಪಣೆಯಲ್ಲಿ ಆರಂಭಗೊಂಡ ಕಾರ್ಯಕ್ರಮದ ಆಶಯ, ಸ್ವಾಗತವನ್ನು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಬಿಚ್ಚಿಟ್ಟವರು ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಸಂಚಾಲಕ, ಕಲಾವಿದ, ಹೊಸನಗರ ಮೇಳದ ಮೆನೇಜರ್ ಶ್ರೀ ಉಜಿರೆ ಅಶೋಕ್ ಭಟ್. ಪುಸ್ತಕ ನಿರೂಪಣೆಯ ಹಿಂದಿನ ಶಕ್ತಿ-ಸ್ಫೂರ್ತಿಗಳನ್ನು, ನೋವು-ನಲಿವನ್ನು, ಧನ್ಯವಾದ-ಕೃತಜ್ಞತೆ ಅರ್ಪಣೆಯೊಂದಿಗೆ ನೆರವೇರಿಸಿದವರು ಮನೋರಮಾ. ನಂತರ ಅದ್ಧೂರಿಯಿಂದ ಜರುಗಿದ ಯಕ್ಷ ಸಪ್ತಾಹ ಪ್ರಯುಕ್ತದ ಎರಡು ಯಕ್ಷಗಾನ ಬಯಲಾಟಗಳು ಭಾರೀ ಜನಸ್ತೋಮದ ಮೆಚ್ಚುಗೆಗೆ ಪಾತ್ರವಾದದ್ದಲ್ಲದೆ ; ಪರಂಪರೆ-ಆಧುನಿಕ ಪ್ರಜ್ಞೆಗಳಿಗೆ ಸಾಕ್ಷಿ ಹೇಳಿತ್ತು ! ಭ್ರಮರಿಗೆ ಭವಿತವ್ಯದೆಡೆಗಿನ ಭರವಸೆಗಳನ್ನು ಭದ್ರಗೊಳಿಸುವ ಅಮಿತ ಪ್ರೋತ್ಸಾಹ, ಆಶೀರ್ವಾದ ದೊರಕಿತ್ತು.




' ಮುದ್ರಾರ್ಣವ '- ನಾಟ್ಯಶಾಸ್ತ್ರ, ಅಭಿನಯದರ್ಪಣ, ಹಸ್ತಲಕ್ಷಣದೀಪಿಕಾ, ಹಸ್ತಮುಕ್ತಾವಳಿ, ಹಠಯೋಗಪ್ರದೀಪಿಕಾ ಮುಂತಾಗಿ ಸುಮಾರು ನೂರಕ್ಕೂ ಮಿಕ್ಕಿದ ಗ್ರಂಥಾವಲೋಕನ, ಗುಣಾತ್ಮಕ ಪರಿಶೀಲನೆ, ವಿದ್ವಾಂಸರ ಸಂದರ್ಶನ, ನೃತ್ಯ ಪ್ರದರ್ಶನಗಳ ಸಮೀಕ್ಷೆಗಳನ್ನೊಳಗೊಂಡ ; ಸಂಗೀತ, ನೃತ್ತ-ನೃತ್ಯ-ನಾಟ್ಯ, ಯೋಗ, ತಂತ್ರ-ಮಂತ್ರ, ಧಾರ್ಮಿಕ ಪೂಜಾ ವಿಧಿ, ವೇದ-ಶಾಸ್ತ್ರ-ಪುರಾಣ, ಸಾಮಾನ್ಯ ಜೀವನಪದ್ಧತಿ, ಮುದ್ರಾ ವಿಜ್ಞಾನ, ಪ್ರತಿಮಾಶಾಸ್ತ್ರ ಮುಂತಾದವುಗಳಲ್ಲಿ ಉಪಯೋಗಿಸುವ ಸಾವಿರಕ್ಕೂ ಹೆಚ್ಚು ಅಸಂಯುತ, ಸಂಯುತ ಹಸ್ತ-ಮುದ್ರೆಗಳ ಸಂವಹನದ ಬಹು ಆಯಾಮಿ ಅಧ್ಯಯನವಾಗಿದೆ.






' ಮುದ್ರಾರ್ಣವ ';- ಈ ಕೃತಿಯನ್ನು ಯಕ್ಷಗಾನದ ಅಗ್ರಮಾನ್ಯ ಕಲಾವಿದ ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣಾರ್ಥವಾಗಿ ರೂಪುಗೊಂಡ ಯಕ್ಷಗಾನ ಪ್ರತಿಷ್ಠಾನವು ಪ್ರಕಾಶಿಸಿದ್ದು, ಪ್ರತಿಷ್ಠಾನದ ಸಂಚಾಲಕರಾಗಿ ಹೊಸನಗರ ಶ್ರೀರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮೇಳದ ಸಂಚಾಲಕ, ಯಕ್ಷಗಾನ ಕಲಾವಿದ ಶ್ರೀ ಉಜಿರೆ ಅಶೋಕ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಪುಸ್ತಕದ ಬೆಲೆ ರೂ. ೨೫೦/- ಆಗಿದ್ದು ; ಪ್ರತಿಗಳಿಗಾಗಿ ದೂರವಾಣಿ ೯೯೬೪೧೪೦೯೨೭, ೯೪೪೯೫೧೦೬೬೬ ಸಂಪರ್ಕಿಸಬಹುದು.
ಖುಷಿ ತಂದ ಕ್ಷಣ

ಕಾದು, ಕಾತರಿಸಿ, ಕನವರಿಸಿ, ನೊಂದು-ಬೆಂದು ನಡೆದು ಪಡೆದ ಖುಷಿ ಎಂದೆಂದಿಗೂ ಇಮ್ಮಡಿಯಾಗುತ್ತಲೇ ಇರುತ್ತದೆ ಎಂಬ ಮಾತು ಸುಳ್ಳಲ್ಲ. ಇಂದಿಗೆ ವಿಶಾಲ ಬಯಲಿನಲ್ಲಿ, ಎತ್ತರದ ಅವಕಾಶದಲ್ಲಿ, ಅನಂತ ಸಾಗರದ ಅಲೆಗಳ ನಡುವೆ ಜೋರಾಗಿ ‘ಹುರ್ರೇ’ ಎಂದು ಮನಬಿಚ್ಚಿ ಕೂಗಿ ಧ್ವನಿಗೈಯ್ಯಬೇಕೆನ್ನಿಸುತ್ತಿದೆ. ಅವು ಮಾರ್ದನಿಯಾಗಿ ನಿತ್ಯವೂ ಅನುರಣಿಸಬೇಕೆನ್ನಿಸುತ್ತಿದೆ. ಕಾರಣ ; ನೂಪುರ ಭ್ರಮರಿ ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್ಸ್ ಫಾರ್ ಇಂಡಿಯಾದಿಂದ ನೋಂದಾವಣೆಗೊಂಡಿದೆ ! ಇದರಲ್ಲೇನಿದೆ? ಸಾಮಾನ್ಯ. ಕಾಣಿಸುವುದು ಸಹಜ. ಆದರೆ ಕಳೆದ ಮೂರು ವರ್ಷಗಳಲ್ಲಿ ನೂಪುರದ ಗೆಳೆಯರ ಬಳಗ ಅದಕ್ಕಾಗಿ ನಡೆಸಿದ ಹೋರಾಟ, ಪ್ರತೀ ಅಂಚೆಯೂ ‘ಸಾನ್ನಿಧ್ಯ’ಕ್ಕೆ ಬಂದಾಗ ಕುತೂಹಲ-ಆತಂಕದಿಂದ ಕಾದು ನೋಡುತ್ತಿದ್ದ ಕಣ್ಣುಗಳು ; ಖಾಸಗೀ ಪ್ರಸಾರದ ಪತ್ರಿಕೆಯೆಂಬ ಬಂಧಗಳಿಂದ ಹೊಸ ಹೊಸಿಲಿಗೆ ಬಂದು ನಿಂತು ಇಂದಿಗೆ ಸಂತಸದ ಹನಿಗೂಡಿರುವುದನ್ನು ಕಾಣುವಾಗ ಸಾರ್ಥಕವೆನಿಸುತ್ತದೆ. ಹೌದು ; ಚಿಕ್ಕಪುಟ್ಟ ಸಂತಸಗಳೇ ಬದುಕಿನ ಸಮೃದ್ಧತೆಯನ್ನು ಬದುಕಿಸುತ್ತವೆ.

ಇವೆಲ್ಲದಕ್ಕೂ ‘ಮುದ್ರಾರ್ಣವ’ವೇ ಮುನ್ನುಡಿ ಬರೆದಿರಬೇಕೆನ್ನಿಸುತ್ತಿದೆ. ಸಂಶೋಧನೆಯ ಚಿಂತನೆ ಪಡಿ ಮೂಡಿದ ಕ್ಷಣಕ್ಕೆ ಮತ್ತಷ್ಟು ಹುಡುಕುವಿಕೆಯ ಎಳೆಗಳು ಸಂಲಗ್ನಗೊಂಡಿವೆ. ನೂಪುರದ ನಾಂದಿ ಧ್ವನಿಸಿದೆ. ನಂತರ, ಕೃತಿ ಅನಾವರಣಗೊಂಡ ಶುಭಲಗ್ನವೋ ಏನೋ, ಮೂರರ ವರ್ಷವನ್ನು ಸ್ವಾಗತಿಸುವ, ನಾಲ್ಕನೇ ಸಂಪುಟವನ್ನು ತೆರೆಯುತ್ತಿರುವ ಘಳಿಗೆಗೆ ಪ್ರೇರಕವಾಗಿ, ಪೂರಕವಾಗಿ ಕೈಯ್ಯಲ್ಲಿ ನೋಂದಾಯಿತಪತ್ರದ ಸಾನ್ನಿಧ್ಯವಿದೆ. ಜೊತೆಗೆ ಶ್ರೀ ಸಾನ್ನಿಧ್ಯ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಇದೀಗ ಹೊಸ ಹುರುಪಿನಿಂದ ತನ್ನ ನಂತರದ ಸದಭಿರುಚಿಯ ಪುಸ್ತಕದ ಆವೃತ್ತಿಗಳಿಗೆ ಸಜ್ಜಾಗಿ ನಿಂತಿದೆ ! ಒಟ್ಟಿನಲ್ಲಿ ಸಂಭ್ರಮದ ಮೂರನೇ ವರ್ಷದ ಆಚರಣೆಗೆ ಅಡಿಯಿಡುವ ಮುನ್ನ ಹೊರೆಯೆನಿಸದ ಹೊಣೆಗಾರಿಕೆಯ ಪ್ರೀತಿ ಹೆಗಲನ್ನು ತಟ್ಟಿದೆ. ಇನ್ನೊಂದಷ್ಟು ಖುಷಿಯ ಕ್ಷಣಗಳನ್ನು ಮುಂದಿನ ದಿನಗಳಲ್ಲಿ ಬರಮಾಡಿಕೊಳ್ಳುವ ನಿರೀಕ್ಷೆಗಳೂ ಇವೆ !

ಹಾಗೆ ನೋಡಿದರೆ, ಪ್ರಾರಂಭದ ದಿನಗಳಲ್ಲಿ ಮೂದಲಿಕೆಯ ಮಾತುಗಳೇ ಸುತ್ತಲಿನಿಂದ ಪ್ರತಿಧ್ವನಿಸಿತ್ತು. ‘ಲಾಭದ ಲವಲೇಶ ಆಶೆಗೂ ಬಗ್ಗದೆ ಅದ್ ಹೇಗೆ ಪತ್ರಿಕೆ ನಡೆಸುವಿರಿ ? ಸಾಕಷ್ಟು ದೂರಗಾಮಿ ಚಿಂತನೆಗಳಿರಬೇಕು. ಪತ್ರಿಕೆ ನಡೆಸುವುದು ಅಂದರೆ ಬೆಂಕಿಯ ಜೊತೆಗಿನ ಬದುಕು. ಮೂರೇ ದಿನದಲ್ಲಿ ಮುಚ್ಚಿ ಹೋಗುತ್ತದೆ’ ಎಂಬ ಹಾರೈಕೆ(?), ಪ್ರಶ್ನೆಗಳು ಇದಿರು ನಿಂತು ಅಣಕಿಸಿದ್ದವು. ಹಾದಿ ನಿಚ್ಚಳವಾಗತೊಡಗಿದಾಗ ಗಮ್ಯದೆಡೆಗೆ ಗಮನ ಸಹಜವಾಗಲೇಬೇಕಲ್ಲವೇ? ಅಡಿ ಮುಂದಿಟ್ಟದ್ದನ್ನು ಹಿಂದೆಗೆಯುವ ಪ್ರಶ್ನೆಯೇ ಇರಲಿಲ್ಲ. ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮತ್ತು ಅದರ ಮಟ್ಟವನ್ನು ವರ್ಷದಿಂದ ವರ್ಷಕ್ಕೆ ಎತ್ತರಕ್ಕೇರಿಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಆದ್ದರಿಂದ ಪ್ರಶೆಗಳನ್ನೇ ಸವಾಲುಗಳಾಗಿ ಮಾಡಿಕೊಂಡು ಬೆಂಕಿಯೆಂಬ ಉರಿಯ ಕಲ್ಪನೆಯಿದ್ದರೂ ಅದರಿಂದಲೂ ಸ್ವಾದಿಷ್ಟ, ಆರೋಗ್ಯಕರ ಅಡುಗೆಯನ್ನೂ ಸಾಧಿಸಿ ಉಣಿಸಬಹುದಾದರೆ ಯಾಕಾಗಬಾರದು ಎಂದು ಹೊರಟಿದ್ದೇ ; ಈವರೆಗೆ ಸಂಗ್ರಹಿಸುವ ಪದಾರ್ಥಗಳಲ್ಲೇ ಪಾಕವೈವಿಧ್ಯವನ್ನು ಸಮಗ್ರವಾಗಿ ಉಣಬಡಿಸುತ್ತಲಿದ್ದೇವೆ. ಇದು ದಣಿದು ಬಂದವರಿಗೆ ನೆರಳಾಗಿದೆ ; ಬಾಯಾರಿದವರಿಗೆ ನೀರುಣಿಸಿದೆ ; ತಂಬೆಲರಾಗಿ ಗಾಳಿ ಬೀಸಿದೆ ; ಬೆಳೆಯುವ ಸಸಿಗಳಿಗೆ ಪೋಷಣೆಯನ್ನೀಯುತ್ತಿದೆ; ಆರೋಗ್ಯವಾದ ಆಹಾರದ ಮಾದರಿಗಳನ್ನು ನೀಡುತ್ತಲಿದೆ ; ಶಕ್ತಿಯನ್ನು ರೂಢಿಸುತ್ತಲಿದೆ ; ಹಳತಿನ ಆಸರೆಯಲ್ಲಿ ಹೊಸ ದಿಕ್ಕಿನೆಡೆಗೆ ನಡೆವ ಸ್ಫೂರ್ತಿಯನ್ನೀಯುತ್ತಿದೆ ; ಹಂಚಿಕೊಳ್ಳುವ ವೇದಿಕೆಯಾಗಿದೆ ಎಂಬುದು ನಮ್ಮ ನೆಮ್ಮದಿ.

ಪತ್ರಿಕೆಯ ಜೊತೆಗಿನ ಪಯಣ ಅಷ್ಟೊಂದು ಸುಲಭವೇ? ನಿರಂತರ ಬದ್ಧತೆಯನ್ನು ಬೇಡುವ ಮತ್ತು ಸವಾಲು, ಸ್ಪರ್ಧೆಗಳನ್ನು ನೀಡುವ ರಂಗವಿದು. ಹಾಗಾಗಿ ಸಂಬಂಧ, ಚಿಂತನೆಗಳ ಗುಣಾಕರ ಭಾಗಾಕಾರಗಳು ನಿರಂತರ ನಡೆದೇ ಇವೆ. ಇಂದಿನ ಖರ್ಚುವೆಚ್ಚಗಳ ನಡುವಿನಲ್ಲೂ ಕಲಾರಸಿಕ ಓದುಗರ ಸಹಕಾರದಿಂದ ಮುನ್ನಡೆದಿದ್ದೇವೆ. ಗೆಳೆಯರ ಬಳಗದ ಅದ್ಭುತ ಸಹಕಾರದ ನಡುವೆಯೂ ಟೀಕೆಗಳು ತಿವಿದಿವೆ; ಎಚ್ಚರಿಸಿವೆ; ವಿರೋಧಾಭಾಸಗಳು, ಮೇಲಾಟಗಳು ಬೆನ್ನು ಬಿಡದೆ ಹಿಂಬಾಲಿಸಿವೆ ; ಒಳಿತು ಕೆಡುಕುಗಳ ದರ್ಶನ ಆಗಿದೆ ; ಒತ್ತಾಸೆ ಬೇಡಿವೆ. ಅಷ್ಟೇ ಅಲ್ಲ; ಇದು ಜೀವನಕ್ಕೊಂದು ನಿಶ್ಚಿತ ಶಿಸ್ತನ್ನು ಕೊಟ್ಟಿದೆ. ಆ ಶಿಸ್ತು ನಮ್ಮ ಕಡಲತಡಿಯ ಮುತ್ತಿನಂತಾದರೂ ; ಮತ್ತಷ್ಟು ಮಣಿಗಳನ್ನು ಪೋಣಿಸುವೆಡೆಗೆ ಹೆಜ್ಜೆ ಹೊರಟಿದೆ. ನಮ್ಮೆಲ್ಲಾ ಪ್ರಯತ್ನಗಳಿಗೂ ನೂತನ ಭಾಷ್ಯ ಬರೆದಿದೆ.

ಇದೆಲ್ಲವೂ ಸಾಧ್ಯವಾದದ್ದು ನೂಪುರದಿಂದ. ನಮ್ಮೆಲ್ಲರಿಂದ ಬೆಳೆದು, ಇದೀಗ ನಮ್ಮನ್ನು ಬೆಳೆಸುತ್ತಿರುವ ನೂಪುರವೆಂಬ ಪ್ರೀತಿಗೆ ನಾವು ಋಣಿಗಳೇ ಹೌದು ! ಜೊತೆಗೆ ಬೆಳೆಸಿದ ಓದುಗರಾದ ನಿಮಗೂ ಋಣಿ. ‘ಯೋಚನೆಗಳಿಗೆ ಕಾಲುಗಳಿದ್ದರೆ ಆದರ್ಶಗಳಿಗೆ ರೆಕ್ಕೆಗಳಿರುತ್ತವೆ.’ ಆದರ್ಶವೂ ಒಂದು ಭ್ರಮೆಯೇನೋ ಎಂಬುದು ಕಾಡುತ್ತಲಿದ್ದರೂ ; ಅದರ ಉತ್ಪನ್ನ ವಿಚಾರಧಾರೆಗಳ ಬೆಂಬಲದ ನಡೆಗೆ ತಿರುವು-ಮುರುವುಗಳು, ಕಲ್ಲುಕೊರಕುಗಳು ಅಗಾಧವೆನಿಸಿದರೂ ; ದೀರ್ಘಕಾಲಕ್ಕೆ ಅವೇ ವಿಚಾರಗಳು ನಿತ್ಯವಿನೂತನವಾಗಿ, ಉತ್ಕೃಷ್ಟವೆನಿಸಿ ಬಾಳುತ್ತವೆ. ಅದಕ್ಕೆ ಉದಾಹರಣೆ, ಕಟ್ಟಿದ ಪುಟ್ಟ ಪುಟ್ಟ ಕನಸುಗಳು ನಡೆಸಿದ ಹೆಜ್ಜೆಗಳು ಅಗಾಧ ಸಾಧ್ಯತೆಗಳ ಮಹಾಪೂರವನ್ನೇ ಇಂದಿಗೆ ತೋರಿಸಿಕೊಡುತ್ತಿರುವುದು. ನೃತ್ಯ ವಲಯದಲ್ಲಿ ಈಗಾಗಲೇ ಮನ್ನಣೆ, ಪ್ರೋತ್ಸಾಹಗಳ ದಿಂಡು ಬೆನ್ನು ತಟ್ಟುತ್ತಿದೆ. ಕೆಲವೆಲ್ಲಾ ಅಚ್ಚರಿಯೆಂಬಂತೆ ಒದಗಿಬಂದಿವೆ. ಹಾಗಾಗಿ ಒದಗಿದ, ಒದಗುವ, ದುಡಿದ, ದುಡಿಯುವ ಕೈಗಳಿಗೆಲ್ಲರಿಗೂ ಅಭಿವಂದನೆಗಳಿವೆ, ಅನಂತ ಅರ್ಪಣೆಗಳಿವೆ.

ಆದರೆ ಗುರಿಯೆಂಬುದು ತಾಣವಲ್ಲ. ಅದು ನಡೆದಷ್ಟೂ ಸವೆಯದ ಹಾದಿ. ಹಾಗಾಗಿ ಕೂಡಿ ಮುನ್ನಡೆಯುವ ಬಲವಿದ್ದರೆ ದಾರಿಯ ಆಯಾಸ, ಏರು ತಗ್ಗುಗಳು ಅಷ್ಟಾಗಿ ನಮ್ಮನ್ನು ಕಾಡದು. ಇನ್ನೂ ಮುಂದಕ್ಕೂ ಹೆಜ್ಜೆಗಳ ಬವಳಿಕೆ ಗೊತ್ತಾಗದಂತೆ ನೀವು ಬೇಕು. ಕಾಳಜಿ, ಅನುಸರಣೆ, ಜೊತೆಗಿರುವ ಹುಮ್ಮಸ್ಸು, ಒಮ್ಮನಸ್ಸು ಬೇಕು. ನೋವು, ಸಂಕಟ ಬಿಗುಮಾನಗಳ ಬಿಮ್ಮಗಿನ ಮುಖ ಹೊತ್ತು ಕೂರದೆ, ಪ್ರೀತಿ-ಕಕ್ಕುಲತೆಗಳನ್ನು ಬರಮಾಡಿಕೊಳ್ಳಬೇಕು. ನಿಮ್ಮ ಸಹಕಾರ, ಆಶೀರ್ವಾದ ಎಂದೆಂದಿಗೂ ನೂಪುರವನ್ನು ಹರಸಬೇಕು. ಈ ಬೆಳವಣಿಗೆಯ ನಿರಂತರ ಅಭೀಪ್ಸೆಗೆ ಜೊತೆಗೆ ಇರುತ್ತೀರಲ್ವಾ? ನೂಪುರ ನಮ್ಮೆಲ್ಲರದು.. ನೆನಪಿರಲಿ.. ಮೂರನೇ ವಸಂತದಲ್ಲೂ ನೂಪುರದ ದನಿ ಮಾರ್ದನಿಸಲಿ, ನಿನಾದ ಗುನುಗುನಿಸುವಂತಾಗಲಿ. ಗುಣಾತ್ಮಕ ಸುಧಾರಣೆಗಳ ಶಕೆ ಬರೆಯಲಿ..

ಪ್ರತೀ ವರ್ಷದ ಮಹಾಶಿವರಾತ್ರಿಯ ಆಸುಪಾಸಿಗೆ ನೂಪುರದ ವರ್ಷದ ಹಬ್ಬ ನಮ್ಮ ಸಂಪ್ರದಾಯ. ನರ್ತನದ ಅಧಿದೇವನಿಗೆ ಒಂದರ್ಥದಲ್ಲಿ ಅರ್ಪಿಸುವ ಅಂಜಲಿಯಿದು ಎಂದೇ ನಮ್ಮೆಲ್ಲರ ಭಾವನೆ. ನಟರಾಜನ ಅನಂತ ಕೃಪೆ, ಕಾರುಣ್ಯ ಎಲ್ಲರನ್ನೂ, ಎಲ್ಲವನ್ನೂ ಕಾಪಿಡಲಿ.

Tuesday, February 9, 2010




ಮಹಾಪುಂಜ

‘ಅಪ್ಪಯ್ಯ, ಅದು ಏವ ನಕ್ಷತ್ರ?’ ಬಿಡುಗಣ್ಣಿಂದ ಆಕಾಶವನ್ನೇ ನೋಡ್ತಾ ಬೆರಳು ಬೊಟ್ಟು ಮಾಡಿ ತೋರ್ಸಿತ್ತು ಕೂಸು.
‘ಅದಾ..ವೃಶ್ಚಿಕ. ಕೂಸೇ!. ನೋಡು. ಅದು ಹೇಂಗಿದ್ದು ಹೇಳಿ. ಕೊಂಬಚ್ಚಿಹುಳದ ಹಾಂಗೆ ಕಾಣ್ತಿಲ್ಯಾ?’ ಅದರ ಅಪ್ಪ ಮಗಳ ಕುತೂಹಲ ತಣುಶುವ ಉತ್ತರ ಆಗಿತ್ತಿದ್ದ. ಜಾಲಿಲಿ ತಿಂಗಳ ಬೆಣ್ಚಿ. ಅದರ ಮಧ್ಯೆ ಪುಟ್ಟ ಮಗಳು ಪದ್ದಿಯ ಮೊಟ್ಟೆಲಿ ಕೂರಿಶಿಕೊಂಡು ಕೈಗೆ ಸಿಕ್ಕದ ಆಕಾಶದ ಕಡೆಂಗೆ ಹಾಂಗೇ ನೋಡ್ತಾ ಇತ್ತಿದ್ದ ಅಪ್ಪ. ಮಗಳಿಂಗೆ ಜೋಯ್ಶೆತ್ತಿಕೆ ಕಲಿಶುವ ಅಂದಾಜೋ ಎಂತದೋ !
‘ಅದಾ..ಅದು ಒಟ್ಟಿಂಗಿದ್ದಲ್ದಾ..ಅದೆಂತರ?’ ಮತ್ತೆ ಬೆರಳು ತೋರ್ಸಿ ಕೇಳಿತ್ತು ಕೂಸು.
‘ಅದರ ಹೆಸರು ಸಪ್ತರ್ಶಿ ಮಂಡಲ ಹೇಳಿ. ಅಲ್ಲಿ ಏಳು ಋಷಿಗೊ ಒಟ್ಟಿಂಗೆ ಇಪ್ಪದಡ. ಹಾಂಗಾಗಿ ಏಳು ನಕ್ಷತ್ರಂಗೊ.’
ಕಣ್ಣು ಕುಂಞ ಮಾಡಿ ಹುಡುಕಿತ್ತು ಕೂಸು. ‘ಆದರೆ ಆರೇ ಕಾಣ್ತನ್ನೆ ! ಏಳೆಲ್ಲಿ?’ ಕಂಡತ್ತಿಲ್ಲೆ ಅದಕ್ಕೆ.
‘ಓ..ಅದಾ ಮಗಳಿಂಗೆ ಕಂಡದೇ..ಉಷಾರು. ಸಾಮಾನ್ಯವಾಗಿ ನವಗೆ ಆರೇ ಕಾಂಬದು ಕೂಸೇ.. ಮಧ್ಯಲ್ಲಿ ಅರುಂಧತಿ ಹೇಳುವ ನಕ್ಷತ್ರ ಇರ್ತಡ. ನೋಡಿರೆ ಬಾಳ ಒಳ್ಳೇದು ಹೇಳಿ ಹೇಳ್ತವು…’ ಹೇಳುವಷ್ಟೂ ಪುರ್ಸೊತ್ತಿಲ್ಲೆ. ಪದ್ದಿಯ ಕಣ್ಣು ಮತ್ತೂ ಸ್ಪಷ್ಟಕ್ಕೆ ಹುಡುಕುಲೆ ಶುರು ಮಾಡಿತ್ತು.
‘ಉಮ್ಮ..ಉಹುಂ..ಕಾಣ್ತಿಲ್ಲೆ.. ಅಲ್ಲಾ..ಏಳೂದೇ ಕಂಡರೆ ಎಂತ ಒಳ್ಳೆದಾವ್ತು?’
‘ಒಳ್ಳೇದಾವ್ತು ಹೇಳಿರೆ ತುಂಬಾ ಪೈಸೆ ಸಿಕ್ಕುಗು. ಉಂಬಲೆ ತಿಂಬಲೆ ಕೊರೆ ಇರ್ತಿಲ್ಲೆ. ಲಾಯ್ಕಿಲಿ ಇಪ್ಪಲಕ್ಕು.’
‘ಹಾಂ..ಅಪ್ಪಾ ಅಪ್ಪ? ‘ಕೂತಲ್ಲಿಗೇ ಅದರ ಬಾಯಿ ಹಿಡಿಗಾತ್ರ ಆತು. ಕೂತಲ್ಲಿಂದಲೇ ಒಂದರಿ ಅಪ್ಪನ ಮೋರೆ ನೋಡಿತ್ತು ಕೂಸು. ಆಕಾಶ ನೋಡ್ತಾ ಇತ್ತಿದ್ದ ಅಪ್ಪನ ಮೋರೆಲಿ ಒಂದು ಬಗೆ ಶಾಂತಬಾವ. ಕಂಡೂ ಕಾಣದ ಕಿರುನೆಗೆ. ಹೊಳೆತ್ತಾ ಇಪ್ಪ ಕಣ್ಣುಗೊ ನಕ್ಷತ್ರಂಗಳನ್ನೇ ತನ್ನೊಳಗೆ ಇರಿಶಿಕೊಂಡ ಹಾಂಗೆ. ಮಗಳ ಮೋರೆ ನೋಡಿ ಕಣ್ಣು ಪಿಳಿಪಿಳಿ ಮಾಡಿದ.
ಕೂಸಿಂಗೆ ನೆಗೆ ಬಂತು.’ಅದದ…ಅಪ್ಪ..ಅದೆಂತದೋ ನಕ್ಷತ್ರ ಓಡ್ತಾ ಇದ್ದು..ನೋಡದ.’
ಮಗಳ ಬೊಬ್ಬೆಗೆ ಬಗ್ಗಿ ನೋಡಿರೆ ಅದು ನಕ್ಷತ್ರ ಆಗಿತ್ತಿದ್ದಿಲ್ಲೆ. ‘ಇದಾ.. ಅದು ನಕ್ಷತ್ರ ಅಲ್ಲ ಚುಬ್ಬೀ. ಏವುದೋ ಇಮಾನ ಹೋಪದೋ, ಉಲ್ಕೆ ಹೇಳುವ ಸಂಗತಿಯೋ ಆಗಿರೆಕ್ಕು. ನಕ್ಷತ್ರ ಹಾಂಗೆಲ್ಲಾ ಅತ್ಲಾಗಿಂದಿತ್ಲಾಗೆ, ಇತ್ಲಾಗಿದಿಂತ್ಲಾಗೆ ಹೋವ್ತಿಲ್ಲೆ. ಆದರೆ ಒಂದೊಂದು ಸಲ ನಕ್ಷತ್ರಂಗೊ ಉರುಳಿ ಕೆಳಂಗೆ ಭೂಮಿಗೆ ಬೀಳ್ತು. ಆದರೆ ಕಾಂಬದೇ ಅಪರೂಪ. ಸತ್ತವೆಲ್ಲವೂ ನಕ್ಷತ್ರ ಆವ್ತವಡ. ಬಿದ್ದ ನಕ್ಷತ್ರಂಗೊ ಮಕ್ಕಳಾಗಿ ಹುಟ್ಟುತ್ತವಡ, ಅಜ್ಜ ಹೇಳುಗು.’
‘ಹಾಂಗಾರೆ ಆನೂದೇ ಹಾಂಗೆ ಹುಟ್ಟಿದ್ದಾ?’
ಮಗಳ ಪ್ರಶ್ನೆಗೆ ಅಪ್ಪಂಗೆ ಎಂತ ಹೇಳೆಕ್ಕೋ ಅರಡಿದ್ದಿಲ್ಲೆ.
ಉತ್ತರಕ್ಕೂ ಕಾಯದ್ದ ಕೂಸಿನ ಕುತೂಹಲದ ಪ್ರಶ್ನೆಗೊ ಮುಂದುವರದುಕೊಂಡಿದ್ದತ್ತು.
’ ಅಪ್ಪಾ..ಅದ್ಯಾವುದೋ ?’
‘ಓ ಅದಾ…ಅದರ ಹೆಸರು ಮಹಾವ್ಯಾಧ ಹೇಳಿ. ಅದಾ…ಅಲ್ಲಿ ಹಾಂಗೆ ಕಾಣ್ತಾ…’... ಅಶ್ಟಪ್ಪಗ ಗೇಟಿನ ಚಿಲಕದ ಸದ್ದಾತು.
ಕತ್ತಲಿಂಗೆ ಯಾರು ಬಂದದೂ ಹೇಳಿ ಸ್ಪಶ್ಟ ಆತಿಲ್ಲೆ. ಜಾಲಿನ ಹತ್ತರದ ದೀಪದ ಬೆಣ್ಚಿಗೆ ಕಂಡಪ್ಪಗ ‘ ಓ..ಅದು ಚಟ್ನಳ್ಳಿ ಮಾವ’ ಬೊಬ್ಬೆ ಹೊಡೆದತ್ತು ಪದ್ದಿ. ಅಂವ ತಂದುಕೊಡುವ ಉಂಡೆ ಚಾಕ್ಲೇಟು, ಕಟ್ಲೀಸು ಪದ್ದಿಗೂ, ಅದರ ತಮ್ಮಂಗೂ ಬಾರೀಪ್ರೀತಿ. ಮಾಂವ, ಮಾಂವ ಹೇಳಿ ಬೊಬ್ಬೆ ಹೊಡದು ಅವನ ಹತ್ರ ಓಡಿ ನಿಂತತ್ತು ಪದ್ದಿ. ಪುಟ್ಟನೂ ಓಡಿಕೊಂಡು ಬಂದ. ಅಪ್ಪಂಗೆ ಏನೋ ಹೇಳೆಕ್ಕೂ ಹೇಳಿ ಜಾನಿಸಿ ಬಾಯಿ ತೆಗದವು ಅಲ್ಲಿಗೇ ಸುಮ್ಮಂಗಾಗಿ ಮೀಸೆ ಕೊಡಿಲಿ ನೆಗೆ ಮಾಡಿದವು.
‘ಮಾಂವ, ನಿನ್ನ ಕಂತುವ ಗೆಡ್ಡ ತೆಗೆಸುದು ಏವಗ’ ಕಟ್ಲೀಸು ತಿಂತಾ ಕೇಳಿತ್ತು ಪದ್ದಿ. ಮಾಂವನ ಗೆಡ್ಡ, ಹಲ್ಲು ಅದಕ್ಕೆ ಒಂದು ಬಗೆ ವಿಚಿತ್ರ ಕಾಂಬದು. ಅದರಪ್ಪಂಗಿಂತಲೂ ಸುಮಾರು ಇಪ್ಪತ್ತು ವರುಷ ಕಡಮ್ಮೆ ಇಕ್ಕು ಅವಂಗೆ. ಆದರೆ ಅವನ ಬಾಯಿಲಿ ಹಲ್ಲೇ ಇಲ್ಲೆ. ಎಣಿಶಿರೂ ಹತ್ತಿಕ್ಕೇನೋ.. ಆದರೂ ಚೂರು ಬಂಙ ಇಲ್ಲದ್ದ ಹಾಂಗೆ ಗೆಡ್ಡ ಬಿಟ್ಟಿದ ! ಆದರೆ ಆ ಗೆಡ್ಡಕ್ಕೂ, ಅಪ್ಪನ ಗೆಡ್ಡಕ್ಕೂ ವೆತ್ಯಾಸ ಎಂತ ಹೇಳಿರೆ ಅದು ಕುತ್ತುತ್ತು, ಇದು ಇಲ್ಲೆ, ಅದು ಕರಿ ಇದ್ದು, ಇದು ಬೆಳಿ-ಕರಿ ಮಿಶ್ರ. ಪರಬ್ಬ ಅಲ್ಲದ ‘ಪರಬ್ಬ ಮಾಂವ’; ಬಾಯಿಬಿಟ್ಟು ಹ್ಹ..ಹ್ಹಾ..ಹ್ಹಾ.. ಹೇಳಿ ನಿಮಿಶಕ್ಕೊಂದರಿ ನೆಗೆ ಮಾಡುವಾಗ ಬ್ರಹ್ಮಾಂಡ ಪ್ರದರ್ಶನ ಅಕ್ಕದಾ ! ಆ ಬೊಚ್ಚು ಬಾಯಗಲ ಮಾಡಿ ನಿಂತರ ಪದ್ದಿಗೆ ಒಳಂಗೆ ಎಂತ ಇಕ್ಕು ಹೇಳೀ ಬಾರೀ ಆಶ್ಚರ್ಯ ಅಪ್ಪದಿದ್ದ್ದು.
ವರ್ಶಲ್ಲಿ ಅಪ್ಪಂದ ಸಣ್ಣ ಆದರೂ ಅಪ್ಪ ದಿನಿಗೇಳುದು ‘ಬಾವಾ’ ಹೇಳಿಯೇ ! ದೂರಲ್ಲೇಲ್ಲೋ ಬಾದರಾಯಣ ನೆಂಟಸ್ತಿಕೆ ಇಪ್ಪ, ಬಾಯಗಲ ಮಾಡಿ ನೆಗೆ ಮಾಡುವ ಚಟ್ನಳ್ಳಿ ಮಾಂವ ಮನೆಗೆ ನಿತ್ಯವೂ ‘ಚಾ’ ಗಿರಾಕಿ. ಅದೂ ಮನೆಂದ ಇಪ್ಪತ್ತು ಮೈಲಿ ದೂರದ ಅವನ ಮನೆಂದ ಪೇಟೆಗೆ ಬಪ್ಪ ಲೆಕ್ಕಲ್ಲಿ ನಿತ್ಯ ಬಂದು ಹೋಕು. ನಾಲ್ಕು-ನಾಲ್ಕುವರೆಗೆ ಪ್ರತ್ಯಕ್ಷ ಅಕ್ಕು. ಆದರೆ ಇಂದು ರಾತ್ರಿಲಿ ! ‘ಎನಗೊಂದು ಕಟ್ಲೀಸು ಸಿಕ್ಕಿತ್ತನ್ನೆ’- ಪದ್ದಿಗೆ ಪೆರ್ಚಿ ಕಟ್ಟುಲೆ ಸಾಕು.
‘ಇದೆಂತ ಮಾರಾಯಾ. ಇಷ್ಟೊತ್ತಿಲಿ ನಿನ್ನ ಸವಾರಿ ಇತ್ಲಾಗಂಗೆ’ ಅಪ್ಪ ಹೇಳುದಕ್ಕೂ, ಅಮ್ಮ ಒಳಂಗಿಂದ ‘ ಬಂತು.. ಇಂದು ಬತ್ತಿಲ್ಲೆ ಹೇಳಿ ನೆನ್ನೆ ಹೇಳಿದ್ದಷ್ಟೇ.. ಪುನಾ ಒಕ್ಕರ್ಸಿತ್ತು. ಶ್..ಶ್..’ ಹೇಳಿ ಎಲಿ ಓಡಿಸಿಕೊಂಡು ಪರಂಚುದಕ್ಕೂ ಸರೀ ಹೋತು.
‘ ಅದೆಂತ ಇಲ್ಲೆ ಮಾರಾಯ. ಎಲಿಗೊ ಜೋರಿದ್ದವಿದ. ಹಾಂಗೆ ಅಷ್ಟೇ ! ನೀನೆಂತ ಗ್ರೇಶಿಕ್ಕೆಡ.’ ಹೇಳಿ ಅಪ್ಪ ಸಮಾದಾನ ಮಾಡಿದವು.
ಮಾಂವಂಗೆ ಮೋರೆಲಿ ಚೋಲಿ ಇಪ್ಪದು-ಹೋಪದು ಹೇಳಿ ಎಲ್ಲಾ ಇಲ್ಲೆ ಇದಾ ಹೇಳಿರೆ ಪದ್ದಿಗೆ ಎಂತದೂ ಅರ್ತ ಆಗ. ‘ಇರಲಿ. ಅದೆಲ್ಲಾ ಎಂತರ ಹೇಳಿ ಬೇಜಾರು ಮಾಡ್ದುಲಿದ್ದು? ಅಕ್ಕ ಎನಗೆ ಬಯ್ದರೂ ಆನು ಬಪ್ಪದು ನಿಲ್ಸುದಿದ್ದಾ? ಇಲ್ಲೆನ್ನೆ ! ಅಂದ ಹಾಂಗೆ ಇವರ ಗೊಂತಿದ್ದಾ? ಹೊಳೆಕರೆ ಶಾಸ್ತ್ರಿಗೊ ಹೇಳಿ..’ ಪರಿಚಯ ಮಾಡಿದ ಮಾಂವ.. ಅಷ್ಟಪ್ಪಗಲೇ ಪದ್ದಿಗೆ ಗೊಂತಾದ್ದು..ಬೇರೊಂದು ಜನವೂ ಇದ್ದು ಹೇಳಿ.
‘ಎಂತದೂ ಇಲ್ಲೆ ಬಾವಾ. ನಿನ್ನೆ ಹೇಳಿದೆನ್ನೆ. ಜಾಗೆ ತೆಕ್ಕೊಂಬ ವಿಚಾರ. ಅದೂ ಆನು-ನೀನು ಒಟ್ಟಿಂಗೇ ಹೇಳಿ. ಇವರದ್ದೇ ಜಾಗೆ ಅದು. ರೆಕಾರ್ಡುಗೊ ಎಲ್ಲಾ ಸರೀ ಇದ್ದಡ. ಮತ್ತೆ ದಿನ ಹೋದರೆ ಇವು ತುಂಬಾ ಬಿಜಿ ಆವ್ತವು. ಸಿಕ್ಕುದು ಕಷ್ಟ ಹೇಳಿ ಸಿಕ್ಕಿಯಪ್ಪಾಗಲೇ ಕರಕ್ಕೊಂಡು ಬಂದೆ.’ ಮಾಂವ ಹೇಳಿದ್ದು ಪದ್ದಿಗೆ ಎಷ್ಟು ಅರ್ತ ಆತೋ, ಬಿಟ್ಟತ್ತೋ ಒಟ್ಟಿಲಿ ಅದರ ನಕ್ಷತ್ರ ನೋಡುವ ಕಾರ್ಯಕ್ರಮಕ್ಕೆ ತಡೆ ಬಿದ್ದತ್ತನ್ನೇ ಹೇಳಿ ಕಂಡತ್ತು.’ ಅಪ್ಪಾ.. ನಕ್ಷತ್ರದ ಕತೆಏಏಏಏಏ..’ರಾಗ ಎಳತ್ತು ಕೂಸು.
‘ಇರು ಮಗಳೇ..ಒಂಚೂರು ಹೊತ್ತು. ಇವರೊಟ್ಟಿಂಗೆ ಮಾತಾಡಿಕ್ಕಿ ಬತ್ತೆ.’ ಹೇಳಿದವನೇ ಅಪ್ಪ; ‘ ಇಲ್ಲಿ ಬೇಡ, ಚಳಿ ಇದ್ದು. ಒಳಂಗೆ ಕೂದು ಮಾತಾಡುವ. ಆಗದಾ’ ಹೇಳಿ ಒಳ ನಡದವು ; ಒಟ್ಟಿಂಗೆ ‘ಬೆಶಿಬೆಶಿ ಎಂತಾರು ಕುಡಿವಲೆ ಮಾಡು’ ಹೇಳಿ ಅಮ್ಮಂಗೆ ಅಪ್ಪಣೆ ಕೊಡಿಶಿಯೂ ಆತು.
ಪದ್ದಿ ಒಳಂಗೆ ಬಗ್ಗಿ ನೊಡಿತ್ತು. ರೆಕಾರ್ಡ್, ನಾಳಿದ್ದು ಮಾಡುವ, ಐವತ್ತು ಸಾವಿರ ಫಸ್ಟಿಂಗೆ, ಶುಭಸ್ಯ ಶೀಘ್ರಂ’ ಹೇಳಿ ಮಾಅತಾಡಿಕೊಂಡದ್ದೆಲ್ಲಾ ಕೆಮಿಗೆ ಬಿತ್ತು. ಆದರೆ ಅರ್ತ ಆಯೆಕ್ಕೇ? ಇದಕಿಂತ ಪುಟ್ಟನೊಟ್ಟಿಂಗೆ ಅವಲಕ್ಕಿದವಲಕ್ಕಿ ಆಡುದೇ ಪಶ್ಟ್ಳಾಸು ಹೇಳಿ ಗ್ರೇಶಿಕೊಂಡು ಆಟ ಆಡುಲೆ ಶುರು !
ಪದ್ದಿಗೋ ಅಪ್ಪಂಗೆ ಹೇಳಿ ಕಾದೂ ಕಾದೂ ಸಾಕುಸಾಕಾತು. ಈಗ ಬತ್ತೆ ಹೇಳಿದ ಅಪ್ಪ ಗಂಟೆ ಆದರೂ ಬಾರದ್ದೇ ಒಳಂಗೇ ಮಾತಾಡಿಕೊಂಡು ಕೂದ್ದಕ್ಕೆ ಬೇಜಾರು. ಪುನಾ ರಾಗ ಎಳತ್ತಾದರೂ ಅಪ್ಪ ಫುಲ್ ಬಿಜಿ. ಇನ್ನು ಕಾವದು ಎಂತಗೆ ಹೇಳಿ ಕಂಡತ್ತೋ ಮಿನಿಯಾ, ಅಟ್ಟುಂಬಳಕ್ಕೆ ಓಡಿ ಅಮ್ಮನ ಸೆರಗು ಹಿಡುದು ನಿಂತು ಪರಪರ ಮಾಡುಲೆ ಶುರು ಮಾಡಿತ್ತು. ಆದರೆ ಅಮ್ಮಂದೇ ‘ಎಂತ ಕೂಸೆ. ಬಿಡು ನೊಡಾ. ಎನಗೆ ಕೆಲಸ ಇದ್ದು, ಎನಗೆ ಎಡಿತ್ತಿಲ್ಲೆ’ ಹೇಳಿ ಜೋರು ಮಾಡಿಯಪ್ಪಗ ಮೋರೆ ಚಪ್ಪೆ ಆತು ಕೂಸಿಂಗೆ.
********
ಇತ್ಲಾಗಿ ಹತ್ತು-ಹದಿನೈದು ದಿನಂದ ಪದ್ದಿಯ ಆಕಾಶ-ನಕ್ಷತ್ರ ನೋಡುವ ಕಾರ್ಯಕ್ರಮಕ್ಕೆ ಮುಹೂರ್ತವೇ ಇಲ್ಲದ್ದ ಹಾಂಗಾಗಿತ್ತು. ಪದ್ದಿಗೂ, ಅದರ ತಮ್ಮಂಗೂ ಬಾರೀ ಬೇಜಾರು. ‘ ಅಪ್ಪ ಅದೂ ಇದೂ ಹೇಳಿ ಮಾಡಿಕ್ಕೊಂಡೇ ಇಪ್ಪದು. ಎಂಗಳ ಒಟ್ಟಿಂಗೆ ಆಟ ಆಡುಲೆ ಬತ್ತವಿಲ್ಲೆ.’ ಅದರ ಗುರುತರ ಆರೋಪ. ಒಂದರಿ ಕೇಳಿಯೂ ಆಗಿತ್ತು. ಅದಕ್ಕೆ ಒತ್ತಡಂಗಳ ಮಕ್ಕಳ ಮೇಲೆ ತೋರುಸುಲೆ ಎಡಿಯದ್ದೆ ಅಮ್ಮನ ಮೇಲೆ ಬೊಬ್ಬೆ ಹೊಡೆದಿತ್ತಿದ್ದ.
‘ಎಂತ ನಿನಗೆ, ಇವರ ನೋಡಿಕೊಂಬಲೆ ಎಡಿತ್ತಿಲ್ಯಾ? ಎನ್ನ ವಯಿವಾಟಿಲಿ ಆನಿದ್ದೆ. ಆ ಬಾಂವ ಪೈಸೆ ಕೊಡೆಕ್ಕು ಹೇಳಿ ಪ್ರಾಣ ತಿಂತ. ‘ಐವತ್ತು’ ಈಗಾಗಳೇ ಕೊಟ್ಟಾಯ್ದು. ಇನ್ನು ಆನೆಲ್ಲಿಂದ ತಪ್ಪದು? ರೆಕಾರ್ಡು ಎಲ್ಲಾ ಮೋಸಡ. ಆ ಜಾಗೆ ಸರಿಯಿಲ್ಲೆಡ. ಕುಂಞ ಬ್ಯಾರಿಯೂ ‘ನಿಮ್ಗೆ ಯಾಕೆ ಭಟ್ರೇ ಆ ಜಾಗ’ ಹೇಳೀ ಕೇಳಿತ್ತು. ಆ ಶಾಸ್ತ್ರಿಯ ತಮ್ಮಂದು ತಕರಾರು ಇದ್ದಡ ಆ ಜಾಗೆ ಮಾರುಲೆ. ಅವನೂ ಎನಗೆ ಪಾಲಿದ್ದು ಹೇಳಿ ಗಲಾಟೆ ಮಾಡ್ತಾ ಇದ್ದಡ. ಅದಕ್ಕೆ ಅಂವ ಮೆಲ್ಲಂಗೆ ಜಾಗೆಯ ದಾಟುಸುಲೆ ನೋಡುದಡ.’ ಎಂತೆಂತದೋ ದಡಬಡ ಹೇಳಿ ಹೇಳಿಕ್ಕಿ ಉಗ್ರಾವತಾರ ತೋರ್ಸಿದ. ಪದ್ದಿಗೆ ಇದರೆಲ್ಲಾ ನೋಡಿ, ಪುಟ್ಟನೊಟ್ಟಿಂಗೆ ಬಾಗಿಲ ಸಂದಿಗೆ ನಿಂತು ಪಿಳಿಪಿಳಿ ಕಣ್ಣು ಬಿಟ್ಟತ್ತು.
ಅದಕ್ಕೆ ಒಂದು ಆಶ್ಚರ್ಯ ಏವಾಗ್ಲೂ ಬಪ್ಪ ಮಾಂವ ಎಂತಗೆ ಈಗೀಗ ಬತ್ತನೇ ಇಲ್ಲೆ? ಎಂತ ಕತೆ? ಕಟ್ಲೀಸು, ಚಾಕ್ಲೇಟು ಎಲ್ಲದಕ್ಕೂ ಕಷ್ಟ ಆತನ್ನೆ ! ಜೋಲು ಮೋರೆ ಹಾಕಿಯೊಂಡು ಗಿಳಿಬಾಗಿಲ ಹತ್ತರ ಬಂದು ಕೂತತ್ತ್ತು.
**********
‘ಇದೆಂತ. ಅಪ್ಪನ ಚರಿಪಿರಿ.. ಶಾಲೆಗೆ ಹೋಪಲಿದ್ದೋ ಹೇಂಗೆ? ಬಾಯಿಪಾಟ ಮಾಡುದೆಂತಗೆ’ ಪದ್ದಿಯ ಪ್ರಶ್ನೆ ಪುನಾ ! ಶಾಲೆಯ ‘ಮನೆಗೆಲಸ’ ಮಾಡುವಲ್ಲಿಂದಲೇ ಎದ್ದು ಬಾಗಿಲ ಕಂಡಿಲಿ ಬಂದು ನೋಡಿತ್ತು.
ಒಳಂಗೆ ಇತ್ತಿದ್ದ ಅಪ್ಪ ಬಾಯಿಪಾಟ ಮಾಡ್ಲೆ ಶುರು ಮಾಡಿತ್ತಿದ್ದ. ‘ ಶಾಸ್ತ್ರಿ ಬಂದ ದಿನಾಂಕ ಇಪ್ಪತ್ತು ಒಂದು ಎರಡು ಸಾವಿರದ ನಾಲ್ಕು. ಜಾಗೆಯ ಅಳತೆ ಒಂದೂವರೆ ಎಕರೆ, ಕೋರ್ಟಿಂಗೆ ಹೋದದ್ದು ಐದು ನಾಲ್ಕು ಎರಡು ಸಾವಿರದ ಐದು. ಚಟ್ನಳ್ಳಿ ರಾಮಭಟ್ಟರಿಗೆ ಸಾಲ ಕೊಡಲಿರುವುದು…’ ಪದ್ದಿಗೆ ಒಂದೂ ಅರ್ತ ಆಯಿದಿಲ್ಲೆ. ಈ ಅಪ್ಪಂಗೆ ಲೆಕ್ಕ ಮಾಡುಲೂ ಬತ್ತಿಲ್ಯಾ? ಇದೆಂತ ಮಗ್ಗಿ ಬಾಯಿಪಾಟ ಮಾಡುದು, ಆನು ಇದರಿಂದ ಲಾಯ್ಕಲ್ಲಿ ಹೇಳ್ತೆ, ಬೇಕರೆ ಕೇಳಲಿ ಹೇಳಿ ಅಪ್ಪಂದಲೂ ಜೋರಿಂಗೆ ಸ್ವರ ತೆಗದು ಹೇಳುಲೆ ಶುರು ಮಾಡಿತ್ತು. ಅಶ್ಟಪ್ಪಗ ಹಿಂದೆಂದ ಬಂದ ಅಮ್ಮ ಪದ್ದಿಯ ಮೋರೆ ನೋಡಿ ‘ ಅದೆಂತ ಬೊಬ್ಬೆ ಹೊಡವದು ನೀನು. ಅಪ್ಪಂಗೆ ಮರತ್ತು ಹೋಪದು ಜಾಸ್ತಿ ಅಲ್ಲದಾ? ನಿನಗೆ ಹೇಳಿ ಕೊಡುದಾದರೆ ಅವಕ್ಕೆ ಬಾಯಿಪಾಟ ಮಾಡುದು ಬೇಡದಾ? ಹೋಗಿ ಓದು..’ಹೇಳಿತ್ತು.
‘ಇದಾ. ನಾಳೆ ವಕೀಲ ಬಪ್ಪಲೆ ಹೇಳಿದ್ದ. ಬಾಂವ ಹೇಳಿದ ಹೇಳಿ ಇಂವ ಎರಡನೇ ವಕೀಲ. ತಿಂಗಳು ಆರು ಕಳುತ್ತು. ಇನ್ನೂ ವ್ಯಾಜ್ಯ ಮುಗುದ್ದಿಲ್ಲೆ. ದೇವರು ಏವಗ ನಡೆಶಿಕೊಡ್ತನೋ’ -ಅಪ್ಪನ ಮಾತಿಂಗೆ ಅಮ್ಮನ ಕಣ್ಣ್ಲಿ ತುಂಬಿದ ನೀರು ಇನ್ನೂ ಕೆಳಂಗಿಳುತ್ತು.
‘ಆನು ಅಂದೇ ಹೇಳಿದ್ದಲ್ದಾ? ಅವಂಗೆ ಎಂತಾಯೆಕ್ಕು? ಬೇಕಾಷ್ಟು ಕೂದು ತಿಂಬಲೆ ಇದ್ದು. ಒಂದರಲ್ಲಿ ಹೋದ ಪೈಸೆಯ ಇನ್ನೊಂದರಲ್ಲಿ ತುಂಬುತ್ತ. ಆದರೆ ನಾವು?’ ಅರ್ಧಕ್ಕೆ ನಿಲ್ಲಿಸಿದ ಅಮ್ಮಂಗೆ ಗಂಟಲುಬ್ಬಿ ಬಂತು. ’ನಿಂಗೊ ನಾಕು ಮನೆ ಪೌರೋಹಿತ್ಯ ಮಾಡಿ ಅವನ ಬಾಯಿಗೆ ಹಾಕಿದ ಹಾಂಗಾತು. ನಾವು ಹತ್ತಿಪ್ಪತ್ತು ವರ್ಶಲ್ಲಿ ಇಪ್ಪಾಂಗೆ ಇದ್ದು. ಅದೇ ಅಂವ ಮೊನ್ನೆ ಮೊನ್ನೆ ನಮ್ಮ ಆಶ್ರಯ ಕೇಳಿಕೊಂಡು ಬಂದು ಇಂದು ನಮ್ಮನ್ನೇ ಮಾರಿ ತಿಂಬ ಹಾಂಗಾತು. ಅವಂಗೆ ಇದ್ದನ್ನೇ..’ –ಅಮ್ಮನ ಬಾಯಲ್ಲ್ಲಿ ಶಾಪವೂ ಸರೀ ಬಾರ. ನಿಟ್ಟುಸಿರ ಹ್ಯಾಪು ನೆಗೆ ಬಂತಷ್ಟೇ..
ಪದ್ದಿಗೆ ಈಗಲೂ ಅರ್ತ ಆಯಿದಿಲ್ಲೆ. ಎಂತ ಮಾತಾಡಿಕೊಳ್ತವೋ..? ಅದೂ ಎನಗೆ ಅರ್ತ ಆಗದ್ದು. ಪಾಟವೋ, ಪದ್ಯವೋ, ಮಗ್ಗಿಯೋ, ನಕ್ಷತ್ರವೋ ಅರ್ತ ಅಕ್ಕು. ಈ ಅಪ್ಪಂಗೆ ಎನ್ನ ಒಟ್ಟಿಂಗೆ ಕೂದು ನಕ್ಷತ್ರ ಎಣುಶುಲೆ ಎಂತ? ಅದ್ಯಾವುದೋ ಲೆಕ್ಕ ಮಾಡಿಕೊಂಡೇ ಕೂರ್ತ, ಕೂದಲ್ಲಿಂದ ಅಲ್ಲಾಡುಲೇ ಇಲ್ಲೆ. ದಿನಿಗೇಳಿ, ದಿನಿಗೇಳಿ ಸಾಕು ಸಾಕಾವ್ತು. ಛೆ..ಹೇಳಿ ಕಂಡತ್ತು ಕೂಸಿಂಗೆ.
*****

ಈಗ ಪದ್ದಿಗೆ ಅಪ್ಪ ಬಾರದ್ದರೂ ಬೇಜಾರಾವ್ತಿಲ್ಲೆ. ಅಬ್ಯಾಸ ಆಗಿ ಹೋಯ್ದು.ಇಂದು ಸ್ಪರ್ದೆಗೆ ನಿಂದ ಹಾಂಗೆ ತಮ್ಮನೊಟ್ಟಿಂಗೆ ಜಾಲಿಲಿ ಕೂದು ನಕ್ಷತ್ರ ಲೆಕ್ಕ ಹಾಕುದರಲ್ಲೇ ಮಗ್ನ ಆಗಿದ್ದತ್ತು. ಅಷ್ಟಪ್ಪಗ ಗೇಟಿನ ಚಿಲಕದ ಸೌಂಡಾತು. ನೋಡಿರೆ ಅಪ್ಪ. ಏವಾಗ್ಲೂ ಮೂರ್ಸಂದ್ಯಪ್ಪಾಗ ಬಪ್ಪ ಅಪ್ಪ ಇಂದು ಕಸ್ತಲೆ ಆದ ಮೇಲೆ ಬಂಯಿದವು. ಪದ್ದಿಗೆ ಎಂತದೂ ವಿಶೇಷ ಹೇಳೀ ಕಂಡತ್ತಿಲ್ಲೆ. ಓಡಿ ಹತ್ತರಕ್ಕೆ ಬಂತು. ‘ ಅಪ್ಪಾ, ನಿಂಗೊ ಹೇಳದ್ರೆ ಬೇಡ. ಆನೇ ಹೇಳ್ತೆ. ಅದಾ. ಅಲ್ಲಿ ಕಾಂಬದು ಮಹಾವ್ಯಾಧ. ಅದು ತಲೆ. ಇದು ಕಾಲು. ಪಕ್ಕಲ್ಲಿ ಇನ್ನೊಂದು ನಕ್ಷತ್ರದ ಹಾಂಗೆ ಇದ್ದನ್ನೆ ; ಅದು ಕತ್ತಿ. ತಲೆಯ ಹೆಸರು ಬಿಟಲ್ಗೀಸ್ ಹೇಳಿಯಡ. ಅದಾ.. ಅಲ್ಲಿ.. ಕೆಂಪು ಹೊಳೆತ್ತಾ ಇದ್ದಲ್ದಾ ಅದು. ಕೆಳಂಗೆ ಕಾಂಬ ಕಾಲಿನ ನಕ್ಷತ್ರದ ಹೆಸರು ರೀಗಲ್ ಹೇಳಿ ! ನೀಲಿ ಇದ್ದಿದಾ… ಗೊಂತಾತಾ? ಎಷ್ಟು ಚೆಂದ ಕಾಣ್ತಲ್ಲದಾ? ಮನುಷ್ಯಂಗೆ ಗೊಂತಾದ ಮೊದಲ ನಕ್ಷತ್ರಂಗಳ ಗುಂಪಿನದ್ದಡ. ನಮ್ಮ ಭೂಮಿಂದ ಬರೀ ಕಣ್ಣಿಲಿ ಕಾಂಬಲಕ್ಕಾದ ಗುಂಪಡ. ಭೂಮಿಂಗೆ ಹತ್ತರ ಇಪ್ಪ ಅದರಲ್ಲಿ ಹೆಚ್ಚು ನಕ್ಷತ್ರಂಗೊ ಹುಟ್ಟುತ್ತವಡ. ನಿಂಗೊ ಹೇಳದ್ರೆ ಎನಗೆಂತ ಟೀಚರ್ ಹೇಳ್ತವಿಲ್ಯಾ? ಆನು ಕಲ್ತೆ. ಪಾಟಲ್ಲಿದ್ದು’.
ಅಪ್ಪ ಮಗಳ ಮೋರೆ ನೊಡಿದ. ಅದಕ್ಕೆ ಉತ್ತರ ದಕ್ಸಿಕೊಂಡ ಕುಶಿ ಇತ್ತು. ಮೆಲ್ಲಂಗೆ ಜಾಲಿಂಗೆ ಬಂದು ತೊಳಶಿಕಟ್ಟೆ ಬುಡದ ಮೆಟ್ಟಿಲ ಹತ್ತರ ಬಂದು ಆಕಾಶವ ಒಂದರಿ ನೋಡಿದ. ಬೀದಿ ದೀಪದ ಬೆಣ್ಚಿ ಜಾಲಿಂಗೆ ಬಪ್ಪಲೆ ವ್ಯರ್ತ ಪ್ರಯತ್ನ ಮಾಡಿಕೊಂಡಿತ್ತು.
ಮನೆಯ ಮೆಟ್ಟಿಲಿಂಗೆ ಕಾಲ್ ಮಡುಗಿದ್ದೇ ನಕ್ಷತ್ರದ ಹತ್ರ ಕಣ್ ಹಾಯ್ಸಿದ. ಪದ್ದಿಗೆ ಅಪ್ಪನ ಮೋರೆಲಿ ಎಂತ ಇದ್ದು ಹೇಳಿಯೇ ಅರ್ತ ಆತಿಲ್ಲೆ. ; ಸಣ್ಣ ನೆಗೆ, ಕಣ್ಣಿಲಿ ಕಂಡ ಹೊಳಪು ಬಿಟ್ಟರೆ !
ಮೇಲೆ ನೋಡಿಕೊಂಡಿದ್ದ ಪದ್ದಿಗೆ ಅಪ್ಪ ಒಳ ಹೋದ್ದು ಗೊಂತಾತಿಲ್ಲೆ ಕಾಣೆಕ್ಕು. ಇನ್ನೂ ಹೇಳುಲೆ ಇತ್ತೂ ಹೇಳಿ ಕಾಣೆಕ್ಕು ! ಪಕ್ಕಲ್ಲೇ ಇದ್ದ ಪುಟ್ಟ ನಕ್ಷತ್ರ ಎಣ್ಸುವ ಕೆಲಸಲ್ಲಿ ಬಿಜಿಯಾಗಿತ್ತಿದ್ದ. ಕೈಯ್ಯ ಬೆರಳು ಸಾಕಾಗದ್ದೆ ಕಾಲನ್ನೂ ಮುಂದೆ ಮಾಡಿ ಮಡುಗಿ ಬೆರಳುಗಳ ಅಗಲ ಮಾಡಿ ಬೆರಳಿಂಗೆ ಎರಡರ ಹಾಂಗೆ ಲೆಕ್ಕ ಹಾಕಿಯೊಂಡಿತ್ತಿದ್ದ. ಅವನ ವಿಚಿತ್ರ ಬಂಗಿಗೆ, ಜೊತೇಲಿ ಅವನ ಬಾಯಿಯ ಲೆಕ್ಕ ಒಟ್ಟಿಗೆ ಸೇರಿಕೊಂಡು ಅವನ ತಲೆಯೂ ಮೇಲಿಂದ ಕೆಳಂಗೆ, ಕೆಳಂದ ಮೇಲಕ್ಕೆ ಏರಿಳುಕೊಂಡಿತ್ತು. ಒಂದರಿ ನಕ್ಷತ್ರ, ಮತ್ತೊಂದರಿ ಲೆಕ್ಕ.
ಪದ್ದಿಗೆ ನೆಗೆ ಬಂತು. ‘ಅಪ್ಪಾ.. ಇದಾ. ಇವನ ಲೆಕ್ಕ ನೋಡಿ.‘ ಹೇಳಿಕೊಂಡೇ ಹೊಸ್ತಿಲಿಂಗೆ ಹೆಜ್ಜೆ ಮಡುಗಿ ಒಳಂಗೋಡಿತ್ತು..